   ಮೂಲದೊಡನೆ ಪರಿಶೀಲಿಸಿ

ಕುಂದಮಾಲಾ

  ರಾಮಾಯಣ ಕಥೆಯ ಆಧಾರದ ಮೇಲೆ ರಚಿತವಾದ ಆರಂಕಗಳ ಸಂಸ್ಕøತ ನಾಟಕ. ಕರ್ತೃ ವೀರನಾಗನೆಂದು ಊಹೆ. ನಾಟ್ಯದರ್ಪಣದಲ್ಲಿ "ವೀರನಾಗ ನಿಬದ್ಧಾಯಾಂ ಕುಂದಮಾಲಾಯಾಂ ಸೀತಾಯಾಸ್ತದಪತ್ಯಯೋಶ್ಚಪಾಲನ ಸಂಯೋಜನಾಭ್ಯಾಂ ಸ್ವಫಲನಿರಪೇಕ್ಷಸ್ಯ ವಾಲ್ಮಿಕೇಃ-ಎಂದಿದೆ". ಈ ಹೆಸರು ಸಂಸ್ಕøತ ಸಾಹಿತ್ಯದಲ್ಲಿ ಪ್ರಸಿದ್ಧವಲ್ಲ. ಈ ನಾಟಕವನ್ನು ಸಂಪಾದಿಸಿ ಪ್ರಕಟಿಸಿರುವ ಕೆಲವು ವಿದ್ವಾಂಸರು ಇದನ್ನು ದಿಙÁ್ನಗ ಕರ್ತೃಕವೆಂದೂ ಧೀರನಾಗ ಕರ್ತೃಕವೆಂದೂ ಅಭಿಪ್ರಾಯಪಡುತ್ತಾರೆ. ವೀರನಾಗನನ್ನೇ ಧೀರನಾಗ, ದಿಙÁ್ನಗ ಎಂದು ಓದಿ ಬರೆದಿರುವಂತೆಯೂ ತೋರುತ್ತದೆ. ಕುಂದಮಾಲೆಯನ್ನು ಕನ್ನಡಕ್ಕೆ ಅನುವಾದ ಮಾಡಿರುವ ಬಿ ಎಚ್. ಶ್ರೀಧರರು ದಿಙÁ್ನಗನನ್ನೇ ಕರ್ತೃವೆಂದು ಅಂಗೀಕರಿಸಿದ್ದಾರೆ. ಸದ್ಯಕ್ಕೆ ನಾಟ್ಯದರ್ಪಣದಲ್ಲಿ ಹೇಳಿರುವಂತೆ ಇದರ ಕರ್ತೃ ವೀರನಾಗನೆಂದು ಇಟ್ಟುಕೊಳ್ಳಬಹುದು. ಈತನ ಕಾಲ, ಸ್ಥಳ ಮುಂತಾದುವು ಖಚಿತವಾಗಿ ತಿಳಿದುಬಂದಿಲ್ಲ. ಭಾಸ ಕಾಳಿದಾಸರ ಸ್ಪಷ್ಟವಾದ ಅನುಕರಣವಿರುವುದರಿಂದ ಅವರಿಗಿಂತ ಈತ ಈಚೆ ಇದ್ದವನಿರಬೇಕು. ನಾಟಕದ ಅಂತರ್ಗತ ಸಾಕ್ಷ್ಯಗಳ ಆಧಾರದಿಂದ ವಿಮರ್ಶಕರು ಈತನ ಕಾಲವನ್ನು ಆರು ಅಥವಾ ಏಳನೆಯ ಶತಮಾನವೆಂದು ಊಹಿಸಿದ್ದಾರೆ.

 ರಾಮಾಯಣದ ಉತ್ತರಕಾಂಡದ ಕಥೆಯೇ ಈ ನಾಟಕದ ವಸ್ತು. ಕವಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಕಥಾಸಾರಂಶ ಹೀಗಿದೆ: ಗರ್ಭಿಣಿಯಾದ ಸೀತೆಯನ್ನು ಲಕ್ಷ್ಮಣ ಗಂಗಾತೀರದ ಕಾಡಿನಲ್ಲಿ ಬಿಟ್ಟುಹೋಗುತ್ತಾನೆ. ಸಂಜೆಯ ಮಬ್ಬಿನಲ್ಲಿ ಅಲ್ಲಿಗೆ ಬಂದ ವಾಲ್ಮೀಕಿ ಅವಳನ್ನು ಗುರುತಿಸಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾನೆ. ತನಗೆ ಸುಖಪ್ರಸವವಾದರೆ ಪ್ರತಿದಿನವೂ ಕುಂದಮಾಲೆಯಿಂದ ಅರ್ಜಿಸುವೆನೆಂದು ಸೀತೆ ಗಂಗೆಗೆ ಹರಕೆ ಕಟ್ಟಿಕೊಳ್ಳುತ್ತಾಳೆ. (1). ಕುಶಲವರು ಹುಟ್ಟಿ ಬೆಳೆದು ಎಲ್ಲರಿಗೂ ಅಚ್ಚುಮೆಚ್ಚಾಗಿ ವೀಣೆಯೊಂದಿಗೆ ರಾಮಾಯಣವನ್ನು ಹಾಡಲು ಕಲಿಯುತ್ತಾರೆ. ಇತ್ತ ರಾಮ ವಾಲ್ಮೀಕಿಯ ಆಶ್ರಮದ ಸಮೀಪದ ನೈಮಿಶಾರಣ್ಯದಲ್ಲಿ ಅಶ್ವಮೇಧಯಜ್ಞಕ್ಕೆ ಅಣಿಮಾಡುತ್ತಾನೆ (2). ಗಂಗಾ ನದಿಯಲ್ಲಿ ಅರ್ಪಣೆ ಮಾಡಿದ್ದ ಕುಂದಮಾಲೆಯನ್ನು ರಾಮಲಕ್ಷ್ಮಣರು ನೋಡುತ್ತಾರೆ. ಅದು ಸೀತೆಯ ಕೈಯಿನ ರಚನೆಯೇ ಎಂದು ರಾಮನಿಗನಿಸುತ್ತದೆ. ಆಯಾಸ ಪರಿಹಾರಕ್ಕಾಗಿ ಲತಾಕುಂಜವೊಂದರಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಸೀತೆ ರಾಮ ಲಕ್ಷ್ಮಣರ ಸಂಭಾಷಣೆಯನ್ನು ಮರೆಯಲ್ಲಿ ನಿಂತು ಆಲಿಸಿ ರಾಮನ ವಿರಹತಾಪದುರಿಯನ್ನು ಅರಿಯುತ್ತಾಳೆ (3). ಆಶ್ರಮದ ಕೊಳವೊಂದರಲ್ಲಿ ರಾಮನಿಗೆ ಸೀತೆಯ ಪ್ರತಿಬಿಂಬ ಮಾತ್ರ ಕಾಣುತ್ತದೆ. ಅದನನ್ನುಸರಿಸಿ ಸೀತೆಯನ್ನು ಹಿಡಿದುಕೊಳ್ಳಲೆತ್ನಿಸಿದ ರಾಮನಿಗೆ ಆಶಾಭಂಗವಾಗಿ ಮೂರ್ಛೆ ಹೋಗುತ್ತಾನೆ. ಸೀತೆಯ ಆಲಿಂಗನದಿಂದ ಪುನಃ ರಾಮನಿಗೆ ಪ್ರಜ್ಞೆ ಬರುತ್ತದೆ. ಸೀತೆಯ ಉತ್ತರೀಯ ಮಾತ್ರ ಕೈಗೆ ಸಿಕ್ಕಿ ಅದನ್ನು ಗುರುತಿಸಿ ಹೊದ್ದುಕೊಳ್ಳುತ್ತಾನಾದರೂ ಶ್ರೀರಾಮ ಸಂಕೋಚದಿಂದ ಅದನ್ನಲ್ಲಿ ಬಿಸುಟು ಬಿಡುತ್ತಾನೆ. ಇದೆಲ್ಲ ಊರ್ವಶೀಯ ಮಾಯಾಜಾಲವೆಂದು ಅಲ್ಲಿಗೆ ಬಂದ ವಿದೂಷಕ ಒಡೆಯನ್ನು ಸಂತೈಸುತ್ತಾನೆ. (4). ಶ್ರೀರಾಮನ ಸಭೆಗೆ ಗಾಯಕರಾದ ಕುಶಲವರ ಪ್ರವೇಶವಾಗುತ್ತದೆ. ವರ ಕುಲಗೋತ್ರಾದಿಗಳನ್ನು ಅರಿಯಲು ರಾಮ ಪ್ರಯತ್ನಿಸುತ್ತಾನೆ. ಅವರು ತನ್ನ ಮಕ್ಕಳೇ ಎಂದವನಿಗೆ ಸಂದೇಹ ಬಂದರೂ ಅದು ಆಗ ಪರಿಹಾರವಾಗುವುದಿಲ್ಲ (5). ರಾಮಲಕ್ಷ್ಮಣರು ಕುಶಲವರಿಂದ ರಾಮಾಯಣ ಕೇಳಿ ಸೀತೆಯ ವೃತ್ತಾಂತವನ್ನು ಅರಿಯುತ್ತಾರೆ. ಕುಶಲವರಿಗೂ ತಮ್ಮ ತಾಯಿತಂದೆ ಯಾರೆಂದು ತಿಳಿಯುತ್ತದೆ. ಸಂತಸದ ಭರದಲ್ಲವರು ಮೂರ್ಛೆ ಹೋಗುತ್ತಾರೆ. ಸೀತೆಯಿಂದ ಅವರ ಸಾಂತ್ವನವಾಗುತ್ತದೆ. ಸೀತಾಪರಿಗ್ರಹಣ ಮಾಡೆಂದು ರಾಮನಿಗೆ ವಾಲ್ಮೀಕಿಯ ಆದೇಶ ಬರುತ್ತದೆ. ರಾಮನಾದರೋ ಅಲಕ್ಷ್ಯದಿಂದಿರುತ್ತಾನೆ. ಸೀತಾಪಾತಿವ್ರತ್ಯ ಪರೀಕ್ಷೆಯಾಗುತ್ತದೆ. ಭೂದೇವಿ ಪ್ರತ್ಯಕ್ಷಳಾಗಿ ರಾಮನಿಗದನ್ನು ತಿಳಿಸಿ ಅಂತರ್ಧಾನಳಾಗುತ್ತಾಳೆ. ಪರಿಗೃಹೀತಳಾದ ಸೀತೆ ಯಜ್ಞದಲ್ಲಿ ಸಹಭಾಗಿನಿಯಾಗುತ್ತಾಳೆ. ಕುಶನಿಗೆ ರಾಜ್ಯ ಪಟ್ಟಾಭಿಷೇಕವಾಗುತ್ತದೆ. ಲವನಿಗೆ ಯೌವರಾಜ್ಯ ಪದವಿ ದೊರೆಯುತ್ತದೆ (6). ಎಲ್ಲವೂ ಸುಖಸಂತೋಷದಲ್ಲಿ ಪರ್ಯವಸಾನವಾಗುತ್ತದೆ. ಹೀಗೆ ಮಾರ್ಪಟ್ಟ ಉತ್ತರರಾಮಚರಿತೆ ಇಲ್ಲಿಯ ವಸ್ತುವಾಗಿದೆ.

 ನಾಟಕದ ಸಂವಾದ ಶೈಲಿ ಲಲಿತ ಮನೋಹರವಾಗಿದೆ; ಪದ್ಮಗಳು ನಿರರ್ಗಳವಾಗಿಯೂ ಸರಸವಾಗಿಯೂ ಸಾಗುತ್ತವೆ. ಪಾತ್ರಚಿತ್ರಣದಲ್ಲಿ ಕೂಡ ಭವಭೂತಿಗೆ ಸರಿದೊರೆಯಾದ ಕೌಶಲವಿಲ್ಲಿದೆ. ಪಾತ್ರಗಳ ಸಂಖ್ಯೆಯಲ್ಲಿ ಮಿತಿ ಇದೆ. ಕೌಸಲ್ಯಾದಿಗಳು ಅಂತಃಪುರಸ್ತ್ರೀಯರಾಗಿ ಪರದೆಯ ಹಿಂದೆ ಇರುತ್ತಾರೆ. ಪದ್ಧತಿಯನ್ನು ಅನುಸರಿಸಿ ವಿದೂಷಕ ಬರುತ್ತಾನೆ. ಆದರೆ ಹೆಚ್ಚು ಹಾಸ್ಯವನ್ನು ಅವನಿಂದ ನಿರೀಕ್ಷಿಸುವಂತಿಲ್ಲ. ವಾಲ್ಮೀಕಿಯೇ ಅಧಿದೇವತೆ. ಇಡೀ ನಾಟಕವೆಲ್ಲ ಅವನ ಆಶ್ರಮದ ಹತ್ತಿರವೇ ನಡೆಯುತ್ತದೆ.

 ಕಥೆ ಕರುಣದಿಂದ ಆರಂಭವಾದರೂ ಅದ್ಭುತದಲ್ಲಿ ಮುಗಿಯುತ್ತದೆ. ಈ ನಾಟಕವನ್ನು ಕುರಿತ 'ಮಲ್ಲಿಗೆಯ ಹೂವಿನಂಥ ದಾಂಪತ್ಯ ಪ್ರೇಮವನ್ನೂ ಪುತ್ರವಾತ್ಸಲ್ಯವನ್ನೂ ಮಾಲೆ ಕಟ್ಟಿ ಸಂಸಾರದ ಹೊಳೆಯಲ್ಲಿ ತೇಲಿಬಿಟ್ಟಂತಿದೆ." ಎಂಬ ಎ.ಆರ್.ಕೃ. ಅವರ ವಿಮರ್ಶೆ ಬಹು ಉಚಿತವಾಗಿದೆ.         

(ಸಿ.ಜಿ.ಪಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ